ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವುದು ಹೇಗೆ...?

Jul 9, 2021 - 14:46
Jul 9, 2021 - 17:14
 2  214
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವುದು ಹೇಗೆ...?

ಪರೀಕ್ಷೆಎನ್ನುವುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನದ ಪರೀಕ್ಷೆಯೇ ಆಗಿಬಿಟ್ಟಿದೆ. ಪರೀಕ್ಷೆಗಳ ಬಗೆಗೆ ಹೆಚ್ಚು Stress ತೆಗೆದುಕೊಳ್ಳಬೇಡಿ ಎಂದು ಯಾರೇ ಹೇಳಿದರೂ ಕೇಳದಷ್ಟು ದಾವಂತಕ್ಕೆ ಮನಸ್ಸು ಪರೀಕ್ಷೆಯ ಪಜೀತಿಯಲ್ಲಿ ಬಿದ್ದು ಬಿಡುತ್ತದೆ.

ಪರೀಕ್ಷೆ ಎನ್ನುವುದು ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆ ಲಭ್ಯವಿರುವ ಅವಕಾಶಗಳನ್ನು ಗಿಟ್ಟಿಸುವ ನಿಟ್ಟಿನಲ್ಲಿ ನಮಗೆ ಬೇಕೋ... ಬೇಡವೋ... ಸ್ಪರ್ಧೆಯಂತೂ ಇದ್ದೆ ಇರುತ್ತದೆ ಮತ್ತು ನಾವು ಅದನ್ನು ನಿಭಾಯಿಸಲೇಬೇಕು.

ಖಾಲಿ ಇರುವ ನಾಲ್ಕು ನೂರ ಐವತ್ತು ಹುದ್ದೆಗಳಿಗೆ ಬರೋಬ್ಬರಿ ನಾಲ್ಕುವರೆ ಲಕ್ಷ ಜನ ಸ್ಪರ್ಧಿಸುತ್ತೇವೆ, ಆದರೆ ಎಷ್ಟು ಜನ ಅದಕ್ಕೆ ಸಿದ್ಧರಾಗುತ್ತೇವೆ? ಎಷ್ಟು ಜನರ ಬಳಿ ಉತ್ತಮ ಅಧ್ಯಯನ ಸಾಮಗ್ರಿ ಇದೆ? ಎಷ್ಟು ಜನರಿಗೆ ಪರೀಕ್ಷೆಯನ್ನು ಗೆದ್ದೆ ಗೆಲ್ಲಬೇಕೆಂದು Strategy ಯೊಂದನ್ನು ರೂಪಿಸಿದ್ದೇವೆ...

 ಎಷ್ಟು ಜನರಿಗೆ ಏಕಾಗ್ರತೆಯ ತೊಂದರೆ ಇದೆ? ಎಷ್ಟು ಜನರಿಗೆ ಶ್ರದ್ಧೆಯೇ ಇಲ್ಲ? ಯಾರಿಗೆ ಆರೋಗ್ಯ ಕೈ ಕೊಡುತ್ತದೆ, ಯಾರಿಗೆ ಗೆಳೆಯರ ನಡುವೆ ಸಮಯ ಸರಿದದ್ದೆ ಗೊತ್ತಾಗುವುದಿಲ್ಲ...? ಯಾರು ಯಾವ ಯೋಜನೆ - ಕಾರ್ಯತಂತ್ರಗಳಿಲ್ಲದೆ ಸುಮ್ಮನೆ ಪರೀಕ್ಷೆಗೆ ಸಿದ್ಧರಾಗುತ್ತೇವೆ ಮತ್ತು ಎಷ್ಟು ಜನರು ಈ ಸಣ್ಣ ತಪ್ಪುಗಳಿಂದ ಪರೀಕ್ಷೆಗಳಲ್ಲಿ ಫೇಲಾಗುತ್ತಿದ್ದೇವೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ನಾವು ಸ್ಪರ್ಧಾ ಪರೀಕ್ಷೆಗಳ ವಿಜೇತರಾಗುವ ದಾರಿ ಹುಡುಕೋಣ...

 ಪರೀಕ್ಷೆಗಳಲ್ಲಿ ವಿಫಲವಾಗಲು ಇರುವ ಎಲ್ಲಾ ಸಾಧ್ಯತೆಗಳನ್ನು ಒಮ್ಮೆ ಅವಲೋಕಿಸಿದಾಗ, ಅ ಎಲ್ಲಾ ಸಾಧ್ಯತೆಗಳನ್ನು ಈ ಕೆಳಗಿನ ನಾಲ್ಕು ಸಂಗತಿಗಳಲ್ಲಿ ಉಪಬಂಧಿಸಬಹುದು.

1) ಸಾಧನೆ

2) ಕಾಳಜಿ

3) ಎಚ್ಚರಿಕೆ

4) ಯೋಜನೆ

ಇವುಗಳನ್ನು ನಾವು ಒಂದೊಂದಾಗಿ ಅವಲೋಕಿಸೋಣ,

ಮೊದಲಿಗೆ  ಸಾಧನೆ

ಸ್ಪರ್ಧಿಸಿ ಸಾಧಿಸಲು ಹೊರಟ ನಾವು ಮೊಟ್ಟ ಮೊದಲಿಗೆ ಎರಡು ಸಂಗತಿಗಳ ಮೇಲೆ ಸಾಧನೆ ಮಾಡಬೇಕು, ಒಂದು ಏಕಾಗ್ರತೆ ಮತ್ತೊಂದು ಶ್ರದ್ಧೆ.

ಏಕಾಗ್ರತೆಯು ಸ್ಪರ್ಧಿಯಲ್ಲಿರಬೇಕಾದ ಮತ್ತು ಸ್ಪರ್ಧಿಯೊಬ್ಬನು ಜಯಿಸಲೇಬೇಕಾದ ಮೊದಲ ವಿಜಯದ ಬಾವುಟ..! ಹಾಗಾದರೆ, ಏಕಾಗ್ರತೆಯನ್ನು ಸಾಧಿಸುವುದು ಹೇಗೆ...?  ಏಕಾಗ್ರತೆ ಸಾಧಿಸಬೇಕಾದರೆ ಮೊದಲು ನಮಗೆ ಶ್ರದ್ಧೆಯಿರಬೇಕು. ಏನು ಶ್ರದ್ಧೆ ಎಂದರೆ...?               

ಶ್ರದ್ಧೆ ಎಂದರೆ ನಮ್ಮ ಗುರಿ ಎಡೆಗೆ ನಮಗಿರಬೇಕಾದ ನಿರಂತರ ಪ್ರಯತ್ನ ಅಥವಾ ಪರಿಶ್ರಮ. ನಮಗೆ ದೇವರೆಡೆಗಿರುವ ಶ್ರದ್ಧೆ ಬದುಕಿನೆಡೆಗೂ ಇದ್ದರೆ, ಬದುಕನ್ನು ರೂಪಿಸಿಕೊಳ್ಳಬೇಕೆಂಬ ಇಚ್ಛೆಯ ಮೇರೆಗೆ ಗುರಿಯನ್ನು ಹೊಂದಿ, ಆ ಗುರಿಯೆಡೆಗೆ ಪರಿಶ್ರಮ ಪಡುತ್ತೇವೆ ಮತ್ತು ಆ ಪರಿಶ್ರಮ ನಿರಂತರವಾದಾಗ ಶ್ರದ್ಧೆಯಾಗುತ್ತದೆ.     ಹಾಗಾದರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲಲು ಹೊರಟ ನಮ್ಮ ಪ್ರಯತ್ನವು ಎಲ್ಲೂ ಕುಂಠಿತಗೊಳ್ಳದೆ, ನಿರಂತರತೆಯನ್ನು ಕಾಯ್ದುಕೊಂಡು ಆಸಕ್ತಿಯಿಂದ ಓದಲು ಶುರು ಮಾಡಬೇಕು. ಆ ರೀತಿಯ ಶ್ರದ್ಧಾ ಪೂರ್ವಕ ಓದಿನಿಂದ ಮಾತ್ರ ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯ.

ಏಕಾಗ್ರತೆ ಮತ್ತು ಶ್ರದ್ಧೆಯನ್ನು ಸಾಧಿಸಿಕೊಳ್ಳುವುದು ಹೇಗೆ..?

ಓದಲು ಶುರುಮಾಡುವ ಸಮಯದಲ್ಲಿ ಮನಸ್ಸನ್ನು ಹಿತವಾದ ಉಲ್ಲಾಸ ಸಮಯವಾಗಿ, ಆಹ್ಲಾದಕರವಾಗಿ ಇಟ್ಟುಕೊಳ್ಳಿ. ಅಂದರೆ, ಹೊಸಬಟ್ಟೆ ಕೊಂಡುಕೊಳ್ಳಲು ಹೊರಟಾಗ ಹೇಗೆ ಉಲ್ಲಾಸ-ಭರಿತವಾಗಿ, ಆನಂದದಿಂದ ನಮಗಿಷ್ಟವಾದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆಯೋ, ಹಾಗೆಯೇ, ಓದಲು ಶುರು ಮಾಡುವಾಗ ನಮಗಿಷ್ಟವಾದ ವಸ್ತುವನ್ನು ನಾವು ಹೊಂದುವ ಉತ್ಸಾಹದಿಂದಲೇ ಶುರುಮಾಡಬೇಕು. ನಾವು ನಮ್ಮಲಿಲ್ಲದ ಜ್ಞಾನವನ್ನು ಹೊಂದಲು ಓದುತ್ತಿದ್ದೇವೆ Enjoy it...

ಉಲ್ಲಾಸದಿಂದ ಓದಲು ಹೊರಟ ನೀವು ಓದಬೇಕಾದ ರೀತಿ ಹೇಗೆ...?

  • ಓದುವ ಕ್ರಮವನ್ನು ನಾವು ಕೆಲವು ವಿಷಯಗಳಡಿಯಲ್ಲಿ ವಿಶ್ಲೇ಼ಷಿಸೋಣ..
  • ಓದು ನಿರಂತರವಾಗಿರಬೇಕಾದರೆ, ಏಕಾಗ್ರತೆಗೆ ಭಂಗವಾಗ-ಬಾರದು ಹಾಗಾಗಿ ಈ ಕೆಳನವುಗಳನ್ನು ತಪ್ಪದೆ ಮಾಡಿ,
  •  ಓದುವ ಸಮಯ ನಿಗದಿಪಡಿಸಿ, ತಪ್ಪದೆ ಆ ಸಮಯದಲ್ಲಿ ಶ್ರದ್ಧೆ ಮತ್ತು ಏಕಾಗ್ರತೆಯಿಂದ ಓದಿ.
  •  ನಿದ್ರೆ ಬರುತ್ತಿರುವಾಗ ಓದಬೇಡಿ ಅಥವಾ ನಿದ್ರೆಯನ್ನು ನಿಯಂತ್ರಿಸಿ ಓದಲು ಪ್ರಯತ್ನಿಸಬೇಡಿ. ವೃಥಾ ಸಮಯ ಹಾಳು, ಅದರ ಬದಲು ಚಿಕ್ಕದೊಂದು ನಿದ್ರೆ ಮಾಡಿ ಪುನಃ ಓದಲು ಪ್ರಾರಂಭಿಸಿ.
  •  ಮನಸ್ಸು ನೀವು ಓದುತ್ತಿರುವ ವಿಷಯಗಳನ್ನು ಗ್ರಹಿಸುವ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ
  • ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ, ನಿಮ್ಮ ಅಧ್ಯಯನ ಸಾಮಗ್ರಿ ಮತ್ತು ನಿಮ್ಮ ನಡುವೆ ಒಂದು connectivity ಸಾಧಿಸಿ.
  • ನೀವು ಓದಲು ನಿಗಧಿಪಡಿಸಿಕೊಂಡ ಸಮಯವು ಸುದೀರ್ಘವಾಗದಿರುವಂತೆ ನೋಡಿಕೊಳ್ಳಿ.

ಓದುವುದು ಹೇಗೆ...?

ಓದಿದ್ದನ್ನು ಗ್ರಹಿಸುವುದು ಪರಿಣಾಮಕಾರಿಯಾಗಬೇಕಾದರೆ, ಈ ಕೆಳಗಿನ ಕ್ರಮಗಳು ಪ್ರಯೋಜನಕ್ಕೆ ಬರುತ್ತವೆ.

ಪಕ್ಷಿನೋಟ :

  • ಅಂದರೆ, ಯಾವ ವಿಷಯ / ಅಧ್ಯಾಯವನ್ನು ನೀವು ಓದಲು ಶುರುಮಾಡುತ್ತಿದ್ದೀರೋ ಅದರ ಮುನ್ನುಡಿ, ಹೆಡ್ಡಿಂಗ್‌, ಸಬ್‌ಹೆಡ್ಡಿಂಗ್‌ ಮತ್ತು ಕೊನೆಯ ಸಾರಾಂಶವನ್ನು ಓದಿ. ಹೀಗೆ ಮಾಡುವುದರಿಂದ ನಿಮಗೆ ಆ  ಅಧ್ಯಾಯವು ಏನು ಹೇಳುತ್ತಿದೆ ಎಂಬ ವಿಷಯದ ಗ್ರಹಿಕೆ ಉಂಟಾಗುತ್ತದೆ ಮತ್ತು ಆ ಮೂಲಕ ನಿಮ್ಮ ಮನಸ್ಸು ಆ ಅಧ್ಯಾಯವನ್ನು ಪೂರ್ಣವಾಗಿ ಗ್ರಹಿಸಲು ಕುತೂಹಲದಿಂದ ಸಿದ್ಧವಾಗುತ್ತದೆ.
  •  ನಂತರ, ಯಾವ ಸಂಗತಿಯನ್ನು ಬಿಡದೆ ಕೂಲಂಕುಶವಾಗಿ, ಪೂರ್ಣ ವಿಷಯವನ್ನು ಅಥವಾ  ಅಧ್ಯಾಯವನ್ನು ಓದಿ. ನೆನಪಿಡಿ, ಓದುವಾಗ ನೀವು ಅಧ್ಯಾಯದಲ್ಲಿನ ಸಂಗತಿಗಳನ್ನು ನಿಮ್ಮ ಗ್ರಹಿಕೆಯು
          ಅವಲೋಕಿಸಿ ಅರ್ಥವನ್ನು ಅಂತರ್ಗತಗೊಳಿಸುತ್ತಿರಬೇಕು
  •  ಆ ಅಧ್ಯಯದಲ್ಲಿನ ಪ್ರತಿ ಪ್ಯಾರಾದ ಮೊದಲ ಸಾಲು, ಯಾವುದೇ ಮುಖ್ಯ ಮಾಹಿತಿ, ದಪ್ಪಅಕ್ಷರಗಳಲ್ಲಿರುವ, ಪ್ರಮುಖ ಘಟನೆ,  ಸಂಖ್ಯೆ, ಕಾಲ, ಸೂತ್ರ ಮುಂತಾದವುಗಳನ್ನು ಚಾರ್ಟ್‌ ಮತ್ತು Key Points ಮಾಡಿಕೊಳ್ಳಿ. ಓದುವಾಗ ಗ್ರಹಿಸಿದ ವಿಷಯವು  ಇತರ ಸಂಬಂಧಿತ ಸಂಗತಿ / ವಿಷಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಆಲೋಚಿಸಿ.
  • ಪೂರ್ತಿ ಓದಿದ ನಂತರ ಆ ಪುಸ್ತಕವನ್ನು ಮುಚ್ಚಿಟ್ಟು, ನಿಮಗೆ ಎಷ್ಟು ನೆನಪಿದೆಯೋ, ಯಾವ ಸಂಗತಿಗಳು ನೆನಪಿದೆಯೋ,  ಅವುಗಳನ್ನು ನಿಮಗೆ ಅರ್ಥವಾಗಿರುವ ಭಾವದಲ್ಲಿ ಬರೆಯಿರಿ. ಅಗತ್ಯವಿದ್ದರೆ      ಮಾಡಿಟ್ಟುಕೊಂಡ key points  ಬಳಸಿಕೊಳ್ಳಿ. ಉದಾಹರಣೆಗೆ, ಬ್ರಿಟಿಷರು ಭಾರತದಲ್ಲಿ  English ಶಿಕ್ಷಣವನ್ನು ಜಾರಿಗೆ ತಂದರು ಎಂದು ಓದುವಾಗ, ಅವರು ತಂದ  ಉದ್ದೇಶವನ್ನು ಓದುವಾಗ ಅದರಿಂದಾದ ಭಾರತೀಯ ಸಂಸ್ಕೃತಿಯ ಮೇಲಿನ ಮತ್ತು ಸಮಾಜದ ಮೇಲಿನ ಇತರ  ಪರಿಣಾಮಗಳನ್ನು ಅವಲೋಕಿಸುವುದು.
  • ನೀವು ಓದಿ ಗ್ರಹಿಸಿದ್ದನ್ನು ಸಹಪಾಠಿಗಳಲ್ಲಿ ತಿಳಿಸಿ, ಚರ್ಚಿಸಿ.
  • ನೀವು ಬರೆದಿದ್ದನ್ನು ಓದಿದ್ದರ ಜೊತೆಗೆ ತಾಳೆಮಾಡಿ ನೋಡಿ, ಬಿಟ್ಟಿರುವುದೆಷ್ಟು...? ಗ್ರಹಿಸಿದೆಷ್ಟು...?  ಮರೆತದೆಷ್ಟು...? ತಪ್ಪಾಗಿ  ಅರ್ಥೈಸಿಕೊಂಡಿದೆಷ್ಟು..? ಪತ್ತೆ ಮಾಡಿ ಪುನಃ ಓದಿ ಸರಿಪಡಿಸಿಕೊಳ್ಳಿ.
  • ನಂತರ ನೀವು ಕಲಿತದ್ದನ್ನು, ನೆನಪಿನಲ್ಲಿರುವುದನ್ನು ವಾರಕ್ಕೊಮ್ಮೆ ಅಥವಾ ಅಧ್ಯಾಯ ಪೂರ್ಣಗೊಂಡ ನಂತರ ನಿಮ್ಮನ್ನು ನೀವು  ಪರೀಕ್ಷಿಸಿಕೊಳ್ಳಿ. ಹೀಗೆ, ಪರೀಕ್ಷಿಸಿಕೊಳ್ಳುವಾಗ ಹಳೆಯ ಪ್ರಶ್ನೆ  ಪತ್ರಿಕೆಗಳನ್ನು, ಅದೇ ವಿಷಯದ ಮೇಲೆ ಬೇರೆ ಬೇರೆ  ಪರೀಕ್ಷೆಗಳಲ್ಲಿ ಕೇಳಿರುವ  ಪ್ರಶ್ನೆಗಳನ್ನು ಉತ್ತರಿಸಿ. ಮತ್ತು  ಮುಖ್ಯವಾಗಿ ಆ ವಿಷಯದ ಮೇಲೆ ಈವರೆಗೂ ಯಾವ ಪರೀಕ್ಷೆಯಲ್ಲೂ ಕೇಳಿರದ ಪ್ರಶ್ನೆಗಳನ್ನು ಪರಿಗಣಿಸಿ. ಇದನ್ನೇ ಮನಶಾಸ್ತ್ರಜ್ಞರು, 4 ‘R’  ಗಳಲ್ಲಿ ತಿಳಿಸುತ್ತಾರೆ.

Read - Recall - Reflect  - Review / Revision

ಓದುವ ದಾವಂತಕ್ಕೆ ಬಿದ್ದು ಹಠಕ್ಕೆ ಬಿದ್ದವರಂತೆ ಒಂದೇ ಸಮನೆ ದೀರ್ಘ ಸಮಯದವರೆಗೂ ಓದಬಾರದು. ಅಂದರೆ, ಯಾವಾಗ ನಿಮ್ಮ ಮನಸ್ಸು ಗ್ರಹಿಸುವುದನ್ನು ಸುಲಭವಾಗಿ ಮಾಡುವುದಿಲ್ಲವೋ ಅಂತಹ ಸಂದರ್ಭದಲ್ಲಿ Take a break.  ಆದರೆ, ಆ ಬ್ರೇಕ್‌ ತುಂಬಾ ಕಡಿಮೆಯದ್ದಾಗಿರಬೇಕು. ಆ ಕಡಿಮೆ ಸಮಯದಲ್ಲಿ ನಿಮ್ಮ ಮನಸ್ಸಿಗೆ ಮುದ ನೀಡುವಂತಹದ್ದನ್ನು ಮಾಡಿ, ನಿಮ್ಮನ್ನು ನೀವು energize  ಮಾಡಿಕೊಳ್ಳಿ.

ಆದರೆ, ಆ ಬ್ರೇಕ್‌ ನಿಮ್ಮನ್ನು ಅಧ್ಯಯನದ ಸಮಯದಿಂದ ಬೇರೆಕಡೆಗೆ ಎಳೆದೊಯ್ಯುವಂತಿರಬಾರದು. So, ಆ ಬ್ರೇಕನ್ನು ಬೇರೆಯವರೊಂದಿಗೆ, ಬೇರೆ ಸಂಗತಿಗಳೊಂದಿಗೆ ತೆಗೆದುಕೊಳ್ಳುವ ಬದಲು ನಿಮ್ಮೊಂದಿಗೆ ನೀವಿದ್ದು ನಿಮ್ಮ ಪರಿಶ್ರಮವನ್ನು ಮುಂದುವರೆಸಿ.

ನಂತರ, ಎರಡನೆಯದಾಗಿ ಕಾಳಜಿ

ಕಾಳಜಿ ವಹಿಸಬೇಕಾದ ಸಂಗತಿಗಳು, ಮೊದನೆಯದು ಆರೋಗ್ಯ ಮತ್ತು ಎರಡನೆಯದು ಅಭ್ಯಾಸ. ಆರೋಗ್ಯವೇ ಭಾಗ್ಯ ಎನ್ನುವುದು ಈಗಾಗಲೇ ನಮಗೆಲ್ಲ ತಿಳಿದಿರುವ ಸತ್ಯ. ನಮ್ಮ  ಗುರಿಯೆಡೆಗಿನ ನಿರಂತರ ಪರಿಶ್ರಮವನ್ನು ನಮ್ಮ ಆರೋಗ್ಯವು ಉತ್ತೇಜಿಸುತ್ತದೆ. ಆರೋಗ್ಯಕ್ಕೂ ಅಭ್ಯಾಸಗಳಿಗೂ, ಅವಿನಾಭಾವ ಸಂಬಂಧ. ನಮ್ಮ ಅಭ್ಯಾಸಗಳು ಉತ್ತಮವಾಗಿದ್ದರೆ, ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

ದೇಹದ ಆರೋಗ್ಯವು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಂಬ ಅಂಶವನ್ನು ಕಡೆಗಣಿಸುವಂತಿಲ್ಲ. ಹೆಚ್ಚಾಗಿ ನೀರು ಕುಡಿಯುವ, ಕಾಯಿಪಲ್ಲ್ಯಾ, ಹಣ್ಣುಗಳು, ಉತ್ತಮ ಪ್ರೋಟೀನ್‌ಯುಕ್ತ ಆಹಾರಗಳು, ಒಣಹಣ್ಣುಗಳು ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ ಹೊಂದಿರುವ ಆಹಾರಗಳು ಮೆದುಳಿಗೆ ಶಕ್ತದಾಯಕವೆನ್ನಿಸಿ ಏಕಾಗ್ರತೆ, ಶ್ರದ್ಧೆ ಮತ್ತು ಜ್ಞಾಪಕ ಶಕ್ತಿಗಳಿಗೆ ಪೂರಕವಾಗಿರುತ್ತವೆಯಾದ್ದರಿಂದ ಉತ್ತಮ  ಆಹಾರ ಅಭ್ಯಾಸ-ಗಳನ್ನು ಹೊಂದುವುದು ಅತ್ಯವಶ್ಯ.

ಹಾಗೆಯೇ, ವೈಜ್ಞಾನಿಕ ವರದಿಗಳು ವ್ಯಾಯಾಮವು Stress ತೆಗೆದುಹಾಕುವುದರಲ್ಲಿ ಸಹಾಯ ಮಾಡುತ್ತದೆಂದು ಹೇಳಿರುವು-ದರಿಂದ ವ್ಯಾಯಾಮದ ಅಭ್ಯಾಸವು ಪರೀಕ್ಷೆಯೆಂಬ ಒತ್ತಡದಿಂದ ನೀವು ಹೊರಬರಲು ಸಹಾಯ ಮಾಡುತ್ತದಷ್ಟೆಯಲ್ಲದೆ, ವ್ಯಾಯಾಮದ ನಂತರ ಮೆದುಳು - ಮನಸ್ಸು ಮತ್ತು ದೇಹದ ನರಗಳು ಹೆಚ್ಚು ಉಲ್ಲಾಸದಾಯಕವಾಗಿರುವುದರಿಂದ ನಿಮ್ಮ ಪರೀಕ್ಷಾ ತಯಾರಿಕೆಗೆ ಪೂರಕವಾಗಿರುತ್ತವೆ.

ಹಾಗಾಗಿ, ಹೆಚ್ಚು ನೀರು ಕುಡಿಯುವ, ವ್ಯಾಯಾಮ ಮಾಡುವ ಮತ್ತು ಧ್ಯಾನ-ಯೋಗಗಳಂತಹ ಉತ್ತಮ ಅಭ್ಯಾಸಗಳೊಂದಿಗೆ ನಿಮ್ಮ ಪರೀಕ್ಷಾ ತಯಾರಿ ಫಲಪ್ರದವಾಗುತ್ತದೆ.

ಮೂರನೆಯದಾಗಿ ʼ‘ಎಚ್ಚರಿಕೆ

ನಾವು ಎಚ್ಚರಿಕೆ ವಹಿಸಬೇಕಾದದ್ದು ಮುಖ್ಯವಾಗಿ ಎರಡು ವಿಷಯಗಳಲ್ಲಿ, ಮೊದನೆಯದು ಸಮಯ ಮತ್ತು ಎರಡನೆಯದು ಸ್ನೇಹ.

 ‘Time is money’ ಅನ್ನುವ ಪದ ಪುಂಜವು ಎಷ್ಟು ಆಕರ್ಷಕವೋ ಅಷ್ಟೆ ಸತ್ಯ... ಸರಿಯಾಗಿ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವವರಿಗೆ ಸರಿಯಾದ ಸಮಯದಲ್ಲೇ ಎಲ್ಲವೂ ಸಿಗುತ್ತದೆ ಎನ್ನಬಹುದು.

ಸ್ನೇಹ ಎನ್ನುವುದು ಪ್ರಪಂಚದಲ್ಲಿಯೇ ಬೆಲೆಕಟ್ಟಲಾಗದ ಸ್ಪೂರ್ತಿದಾಯಕ ಸಂಬಂಧ. ಆದರೆ, ನಮ್ಮ ಸ್ನೇಹ ಎಂತಹುದು...? ಅದು ನಮ್ಮನ್ನು ಎಲ್ಲಿ ನಿಲ್ಲಿಸಿ ಅಭಿನಂದಿಸಲಿದೆ...? ಆಲೋಚಿಸಿ. ನಮ್ಮ ಸ್ನೇಹವು ನಮಗೆ ಶಕ್ತಿಯಾಗಿರಬೇಕು, ಸ್ಪೂರ್ತಿಯಾಗಿರಬೇಕು. ನಮ್ಮ ಸ್ನೇಹವು ನಮ್ಮ ಗುರಿಗೆ ಪ್ರೋತ್ಸಾಹ ತುಂಬಬೇಕು ಮತ್ತು ನಮ್ಮ ಉತ್ತಮ ಮಾರ್ಗದರ್ಶಕವಾಗಿರಬೇಕು. ಸಮಯದ ಪರಿಧಿಯಲ್ಲಿ ನೀವು ಸಾಧಿಸುವ ಗುರಿಗೆ ಪೂರಕವಾಗಿರಬೇಕು ಸ್ನೇಹ.

ನೆನಪಿನಲ್ಲಿಡಿ :

ಸಾಧಿಸಿದವನು ಹೇಳುವ ಮಾತಷ್ಟೇ ನಾಣ್ಣುಡಿಯಾಗುತ್ತದೆ. ಸಾಧಿಸದವನು ನುಡಿಯುವ ಮಾತು ಟೊಳ್ಳೆಯನಿಸಿಕೊಳ್ಳುತ್ತದೆ.

“Don’t  kill  me  by  wasting  my  time” ಎನ್ನುವ ಹಣೆಪಟ್ಟಿಯೊಂದನ್ನು, ಸಾಧಿಸ ಹೊರಟ ಪ್ರತಿಯೊಬ್ಬನು ಹೊಂದಿರಬೇಕು.

ಕೊನೆಯದಾಗಿ ಮತ್ತು ಅತ್ಯಂತ ಮುಖ್ಯವಾದುದು ‘ಯೋಜನೆ’.

ನಾವು ಸಾಧಿಸಬೇಕಾದ ಗುರಿಯೆಡೆಗೆ, ಗೆಲ್ಲಬೇಕಾದ ಪರೀಕ್ಷೆಯನ್ನು ಯಶಸ್ವಿಯಾಗಿ  ಗೆಲ್ಲುವ ಯೋಜನೆಯೊಂದನ್ನು ಮೊದಲು ರೂಪಿಸಬೇಕು. ಅದಕ್ಕೆ ಬೇಕಾದುದು ಎರಡು, ಒಂದು ಕಾರ್ಯತಂತ್ರ (strategy) ಮತ್ತೊಂದು ಕಾರ್ಯಾಚರಣೆ  (Execution). ಪರೀಕ್ಷೆಯ ತಯಾರಿಯಿಂದ ಹಿಡಿದು ಪರೀಕ್ಷೆ-ಯನ್ನು ಗೆಲ್ಲುವವರೆಗೂ ಒಂದು ಕಾರ್ಯತಂತ್ರವನ್ನು ರೂಪಿಸಬೇಕು. Strategy ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಭಾಯಿಸುವುದು ಕಷ್ಟ.

ಹಾಗಾಗಿ, ಸೂಕ್ತ ಪುಸ್ತಕ / ಅಧ್ಯಯನ ಸಾಮಗ್ರಿಗಳನ್ನು ಓದುವ, ಅಧ್ಯಯನದ Timetable ಹಾಕಿಕೊಂಡು, ಪ್ರತಿದಿನವೂ ಇಂತಿಷ್ಟು Target ಸಾಧಿಸುವ ಅಧ್ಯಯನವು ಆಸಕ್ತಿದಾಯಕ-ವೆನಿಸಬೇಕು ಮತ್ತು ಕಡಿಮೆ ಅವಧಿಗಳಿಗೆ ಗುರಿಗಳನ್ನು ಆಯೋಜಿಸಿ, ಆ ಗುರಿಗಳನ್ನು ದಾಟುತ್ತಾ ಹುರಿ-ದುಂಬಿಸಿಕೊಳ್ಳಬೇಕು.

ನಿಯಮಿತ Target ಗಳು, ನಿಯಮಿತ Test ಗಳು, ನಿಯಮಿತವಾಗಿ ಹಳೆಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವುದು, ಸೂಕ್ತ ಅಧ್ಯಯನ ಸಾಮಗ್ರಿಯೊಂದಿಗೆ ಸೂಕ್ತ Timetable ಹೊಂದಿ, ಅದನ್ನು ಅನುಸರಿಸುವುದು ನಿಮ್ಮ ಪರೀಕ್ಷಾ ತಯಾರಿಯನ್ನು ಶ್ರಮದಾಯಕ / ಒತ್ತಡದಾಯಕಗೊಳಿಸದೆ, ಗೇಮ್‌ ಆಡುವ ಅನಂದವನ್ನು ನೀಡತ್ತದೆ. ಇದು Memory & Mind  ಗೇಮ್‌ ಆಗಿರುತ್ತದಷ್ಟೆ.

ಒಟ್ಟಾರೆ ಹೇಳುವುದಾದರೆ, ಯಾವುದೇ ಪರೀಕ್ಷೆ ನಿಮ್ಮ ಗುರಿಯಾಗಿದ್ದರೆ, ಅದರ ಸಿದ್ದತೆ ನಿಮ್ಮ ಆನಂದವಾಗಿರಬೇಕುಅದಕ್ಕೆ ಪೂರಕವಾದ ಕಾಳಜಿಯಿರಬೇಕು, ಸಮಯದ ಪ್ರಜ್ಞೆ ಇರಬೇಕು ಮತ್ತು ಸ್ಪರ್ಧೆಯನ್ನು ಗೆಲ್ಲುವ ಕಾರ್ಯತಂತ್ರ ರೂಪಿಸಿ , ಕಾರ್ಯಾಚರಣೆ ಮಾಡಬೇಕು.

What's Your Reaction?

like

dislike

love

funny

angry

sad

wow